ಮಾರ್ಷಲ್, ಜಾನ್ ಹ್ಯೂಬರ್ಟ್
1876-1958. ಬ್ರಿಟಿಷ್ ಪುರಾತನಶಾಸ್ತ್ರಜ್ಞ. ಜನನ 1876 ಮಾರ್ಚ್ 19 ರಂದು. ಭಾರತದ ವೈಸ್‍ರಾಯ್ ಲಾರ್ಡ್ ಕರ್ಜನ್ ಈತನನ್ನು ಭಾರತದ ಪುರಾತತ್ವ ಸರ್ವೇಕ್ಷಣದ ಪ್ರಧಾನ ನಿರ್ದೇಶಕನಾಗಿ 1902ರಲ್ಲಿ ನೇಮಿಸಿದ. ಆ ಹುದ್ದೆಯಲ್ಲಿ ಈತ 1931ರ ತನಕ ಇದ್ದ. ಈತನ ಅಧಿಕಾರಾವಧಿಯಲ್ಲಿ ಭಾರತೀಯ ಪುರಾತತ್ವ ಇಲಾಖೆಯಲ್ಲಿ ಗಣನೀಯ ಪ್ರಗತಿಯಾಯಿತು. ಹಲವು ಹುದ್ದೆಗಳಿಗೆ ಭಾರತೀಯರನ್ನೇ ನೇಮಕ ಮಾಡಿದನಲ್ಲದೆ ಭಾರತೀಯ ಪುರಾತತ್ವಜ್ಞರ ತರಬೇತಿಗಾಗಿ ಶಿಷ್ಯವೇತನಗಳನ್ನು ಸ್ಥಾಪಿಸಿದ ಕೂಡ.

ಪ್ರಾಚೀನ ಸ್ಮಾರಕಗಳ ಸಂರಕ್ಷಣೆಗೆ ಆದ್ಯತೆ ನೀಡಿದ ಮಾರ್ಷಲ್ ಅವುಗಳ ಯಾದಿಯನ್ನು ಸಿದ್ಧಪಡಿಸಿದ. ವಸ್ತುಸಂಗ್ರಹಾಲಯ ಕಾರ್ಯದ ವಿಸ್ತರಣೆ, ಶಾಸನಗಳ ಪ್ರಕಟಣೆ ಹಾಗೂ ವ್ಯವಸ್ಥಿತ ರೀತಿಯಲ್ಲಿ ವಾರ್ಷಿಕ ವರದಿಗಳ ಪ್ರಕಟಣೆ ಈತನ ಸಾಧನೆಗಳಲ್ಲಿ ಸೇರಿವೆ. ಈತನ ಕಾಲದಲ್ಲಿ ಪ್ರಾಚೀನ ವರದಿಗಳ ಪ್ರಕಟಣೆ ಈತನ ಸಾಧನೆಗಳಲ್ಲಿ ಸೇರಿವೆ. ಈತನ ಕಾಲದಲ್ಲಿ ಪ್ರಾಚೀನ ಐತಿಹಾಸಿಕ ನಿವೇಶನಗಳಲ್ಲಿ ಉತ್ಖನನ ನಡೆಸುವ ವ್ಯಾಪಕ ಯೋಜನೆಯನ್ನು ಇಲಾಖೆ ಕೈಗೊಂಡಿತು. ಚಾರ್ಸದ, ಭೀಟಾ, ಪಾಟಲಿಪುತ್ರ (ಪಟಣ), ವೈಶಾಲಿ ಹಾಗೂ ತಕ್ಷಶಿಲಾ, ಬೌದ್ಧಕೇಂದ್ರಗಳಾಗಿದ್ದ ಸಾಂಚಿ, ಸಾರನಾಥ, ಕಸಿಯಾ ಮತ್ತು ಶ್ರಾವಸ್ತಿ ಇವು ಉತ್ಖನನಗೊಂಡ ನಿವೇಶನಗಳು. ಈತನ ನೇತೃತ್ವ ಮತ್ತು ನಿರ್ದೇಶನದಲ್ಲಿ ನಡೆಸಿದ ಉತ್ಖನನದಲ್ಲಿ ಹರಪ್ಪ (1921) ಮೊಹೆಂಜೊದಾರೊ (1922) ನಿವೇಶನಗಳು ಬೆಳಕಿಗೆ ಬಂದುವು. ಪುರಾತತ್ವ ಇಲಾಖೆಯ ಅಧಿಕಾರಿಗಳಿಗೆ ಸ್ಮಾರಕಗಳನ್ನು ರಕ್ಷಿಸುವ ವಿಧಾನವನ್ನು ಪರಿಚಯಿಸುವ ಕೈಪಿಡಿಯೊಂದನ್ನು ಗಾಂಧಾರ ವಾಸುಪಂಥದ ಉಗಮ, ಬೆಳವಣಿಗೆ ಹಾಗೂ ಅವನತಿಯನ್ನು ಚಿತ್ರಿಸುವ ಕೃತಿಯೊಂದನ್ನೂ ರಚಿಸಿದ. ಸಾಂಚಿ ಹಾಗೂ ತಕ್ಷಶಿಲಾ ಕುರಿತ ಕಿರು ಪುಸ್ತಿಕೆಗಳು ಈತನ ಇನ್ನೆರಡು ಕೃತಿಗಳು. ಮಾರ್ಷಲನ ಅತಿಪ್ರಮುಖ ಕಾಣಿಕೆಗಳೆಂದರೆ ಮೊಹೆಂಜೋದಾರೊ ಅಂಡ್ ದಿ ಇಂಡಸ್ ಸಿವಿಲಿಸೇಷನ್ ಕೃತಿಯ ಮೂರು ಸಂಪುಟಗಳು (1939) ಹಾಗೂ ತಕ್ಷಶಿಲಾ ಉತ್ಖನನ ಕುರಿತ ಮೂರು ಬೃಹತ್ ಸಂಪುಟಗಳು (1951).

ಪ್ರಾಚೀನ ಸ್ಮಾರಕಗಳತ್ತ ವಿಶೇಷ ಗಮನವಿತ್ತ ಮಾರ್ಷಲ್ 1958 ಆಗಸ್ಟ್ 17 ರಂದು ತೀರಿಕೊಂಡರು.
(ಎಚ್.ಎಂ.ಎನ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ